ಹಣ, ಅಧಿಕಾರದ ಮದದಲ್ಲಿ ಕಳೆದುಹೋಗುತ್ತಿದೆಯೇ ಒಕ್ಕಲಿಗರ ಅಸ್ಮಿತೆ? ಕೋಲಾರದ ವ್ಯವಸ್ಥೆಯ ವಿರುದ್ಧ ಕಟುಸತ್ಯದ ನೇರ ನುಡಿ!

ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿಯೆಂದರೆ ಕೇವಲ ಹಾರ-ತುರಾಯಿಗಳ ಸಂಭ್ರಮವಲ್ಲ, ಅದು ಅವರ ನಿಜವಾದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಮಯ. ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತ ವೈಫಲ್ಯ, ಯೋಗ್ಯತೆಯಿಲ್ಲದವರಿಗೆ ವೇದಿಕೆ ನೀಡುತ್ತಿರುವ ವ್ಯವಸ್ಥೆಯ ದುರಂತ ಹಾಗೂ ಭವಿಷ್ಯದ ದೃಷ್ಟಿಯಿಂದ ಸಮುದಾಯದ ಐಕ್ಯತೆಯ ಅನಿವಾರ್ಯತೆಯನ್ನು ಎಚ್ಚರಿಸುವ, ಪ್ರತಿಯೊಬ್ಬರೂ ಓದಲೇಬೇಕಾದ ವಿಶೇಷ ಸಂಪಾದಕೀಯ.

Rohan Gowda

6/27/20261 min read

ನಾಡಪ್ರಭು ಕೆಂಪೇಗೌಡರ ಜಯಂತಿ: ಹಣ, ಅಧಿಕಾರದ ಮದದಲ್ಲಿ ಕಳೆದುಹೋಗುತ್ತಿದೆಯೇ ಒಕ್ಕಲಿಗರ ಅಸ್ಮಿತೆ?

ಕೋಲಾರ ಜಿಲ್ಲಾ ಒಕ್ಕಲಿಗರ ಸಂಘದ ಆಡಳಿತ ವೈಫಲ್ಯ ಹಾಗೂ ಸಮುದಾಯದ ಹೊಣೆಗಾರಿಕೆಯ ಕುರಿತು ಒಂದು ನೇರ ನುಡಿ.
ಸಂಪಾದಕೀಯ ಲೇಖನ

ಇಂದು ನಾಡ ಹೆಮ್ಮೆಯ ನಾಡಪ್ರಭು ಕೆಂಪೇಗೌಡರ ಜಯಂತಿ ಉತ್ಸವ. ಒಂದು ಲಿಖಿತ ಸಂವಿಧಾನ ಅಸ್ತಿತ್ವದಲ್ಲಿ ಇಲ್ಲದಿದ್ದ ಕಾಲದಲ್ಲೇ ಜಾತ್ಯತೀತತೆ ಮತ್ತು ಸಮಾನತೆಯ ಆಡಳಿತವನ್ನು ನೀಡಿದ ಮಹಾನ್ ದಾರ್ಶನಿಕರು ನಮ್ಮ ನಾಡಪ್ರಭುಗಳು. ಆದರೆ, ಇಂದಿನ ಪ್ರಸಕ್ತ ಸಮಾಜ, ವಿಶೇಷವಾಗಿ ಒಕ್ಕಲಿಗ ಸಮುದಾಯ ಅರಿತುಕೊಳ್ಳಬೇಕಾದ ಕಠೋರ ಸತ್ಯವೊಂದಿದೆ: ನಮ್ಮ ಕೆಂಪೇಗೌಡರು ಎಂದರೆ ಕೇವಲ ದುಡ್ಡಿನಿಂದ ಬಹಳ ಎತ್ತರಕ್ಕೆ ನಿರ್ಮಿಸಿರುವ ಪುತ್ತಳಿಯಲ್ಲ, ಅಥವಾ ಕೌಟುಂಬಿಕ ರಾಜಕಾರಣದ ಪಳೆಯುಳಿಕೆಯೂ ಅಲ್ಲ.

ಕಾಲಭೈರವೇಶ್ವರನ ಆಶೀರ್ವಾದದಿಂದ, ತಮ್ಮ ಸ್ವಂತ ವ್ಯಕ್ತಿತ್ವ, ಅರ್ಹತೆ ಮತ್ತು ಗುಣಗಳಿಂದ ಬೆಳೆದು ಹೆಮ್ಮರವಾಗಿ ನಿಂತು, ಒಕ್ಕಲಿಗ ಸಮುದಾಯಕ್ಕೆ ಕಳಶದಂತಹ ಗೌರವವನ್ನು ಗಳಿಸಿಕೊಟ್ಟ ಮಹೋನ್ನತ ಶಿಲ್ಪಿ ಅವರು. ಸಮಾಜವನ್ನು ಅಣ್ಣ-ತಮ್ಮಂದಿರಂತೆ ಸಮಾನತೆಯಿಂದ ಕಂಡ ಶ್ರೇಷ್ಠ ಒಕ್ಕಲಿಗನಿಗೆ ನಾವು ಇಂದು ನೀಡುತ್ತಿರುವ ಗೌರವ ಕೇವಲ ವ್ಯಕ್ತಿನಿಷ್ಠವಾಗಬಾರದು; ಅದು ಸಮಾಜಕ್ಕೆ ಮಾರ್ಗದರ್ಶಿಯಾಗಬೇಕಿರುವ ಅವರ 'ಅಸ್ಮಿತೆಗಳ' ಜ್ಯೋತಿಯಾಗಬೇಕು.

ಕಳಶವನ್ನು ಹಣದಿಂದ ತೂಗಲು ಸಾಧ್ಯವೇ?

ನಾಡಪ್ರಭುಗಳು ಇಡೀ ಸಮಾಜಕ್ಕೆ ಆಸ್ತಿಯಾದರೆ, ಒಕ್ಕಲಿಗ ಸಮುದಾಯಕ್ಕೆ ಅವರು ಕಳಶವಿದ್ದಂತೆ. ಒಂದು ಕಳಶದ ಶ್ರೇಷ್ಠತೆಯನ್ನು ಕೇವಲ ಅದರ ಮೇಲಿರುವ ಬಂಗಾರ, ವೈಡೂರ್ಯ ಅಥವಾ ಅಲಂಕಾರದಿಂದ ತೂಗಲು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ನಾಡಪ್ರಭುಗಳ ಗೌರವವನ್ನು 'ಕೇವಲ ಹಣವಿದೆ' ಅಥವಾ 'ಅಧಿಕಾರವಿದೆ' ಎಂಬ ವ್ಯಕ್ತಿತ್ವವುಳ್ಳ ಜನರಿಂದ ತೂಗಲು ಖಂಡಿತಾ ಸಾಧ್ಯವಿಲ್ಲ.

ಇದೇ ಕಾರಣಕ್ಕೆ ಕೆಂಪೇಗೌಡರ ಜಯಂತಿಯಂದು ಕುಲಬಾಂಧವರ ಜವಾಬ್ದಾರಿ ಅತಿ ಹೆಚ್ಚಿರುತ್ತದೆ. ಕೇವಲ ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದ್ದಾರೆ ಎಂಬ ಕಾರಣಕ್ಕೆ, ದುಡ್ಡು ಚೆಲ್ಲಿ ಹಿರಿಮೆಯಿಂದ ಕಾರ್ಯಕ್ರಮ ಮಾಡುವವರನ್ನು ವಿಜೃಂಭಿಸುವ ಬದಲು, ಯಾರು ಕೆಂಪೇಗೌಡರ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೋ ಅಂತಹ ವ್ಯಕ್ತಿತ್ವಗಳನ್ನು ವೇದಿಕೆ ಮೇಲೆ ತರಬೇಕಿದೆ.

ಆದರೆ ಇಂದಿನ ವಿಪರ್ಯಾಸವೆಂದರೆ, ಯೋಗ್ಯತೆ ಇಲ್ಲದಿದ್ದರೂ ಕೇವಲ 'ಹಣ' ಇದೆ ಎಂಬ ಒಂದೇ ಕಾರಣಕ್ಕೆ ನಮ್ಮದೇ ಕುಲಬಾಂಧವರು ಎಂಬ ಕುರುಡು ಅಭಿಮಾನದಿಂದ ಅಯೋಗ್ಯರಿಗೆ ಕೆಂಪೇಗೌಡರ ವೇದಿಕೆಗಳನ್ನು ಬಿಟ್ಟುಕೊಡಲಾಗುತ್ತಿದೆ. ಇದನ್ನು ನೋಡಿಯೂ ಸ್ವಾಭಿಮಾನ ಹೀನರಾಗಿ ಪ್ರಶ್ನಿಸದೆ 'ಬಕೆಟ್' ಹಿಡಿಯುವ ಮಂದಿ ಸಮುದಾಯದಲ್ಲಿ ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ.

ಕೋಲಾರದ 'ಉತ್ತರಕುಮಾರ'ರು ಮತ್ತು ವ್ಯವಸ್ಥೆಯ ಅಣಕ

ಇದಕ್ಕೆ ಅತ್ಯಂತ ನಾಚಿಕೆಗೇಡಿನ ಉದಾಹರಣೆ ಎಂದರೆ ಗಂಗರ ರಾಜಧಾನಿಯಾಗಿ, ಪೌರುಷ ಮತ್ತು ಎದೆಗಾರಿಕೆಗೆ, ಹಾಗೂ ಧರ್ಮ-ನ್ಯಾಯಯುತ ನಡವಳಿಕೆಗೆ ಶ್ರೇಷ್ಠವೆನಿಸಿದ ಕೋಲಾರ ಜಿಲ್ಲೆ.

ಕೋಲಾರ ಜಿಲ್ಲೆಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯಲ್ಲಿ ಕಳೆದ 40 ವರ್ಷಗಳ ಸುದೀರ್ಘ ಅವಧಿಯಿಂದ ಸಾಂವಿಧಾನಿಕ ನಡವಳಿಕೆಗಳನ್ನು ಅತ್ಯಂತ ತುಚ್ಛವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಯೋಗ್ಯತೆ ಹೀನ ಪ್ರಸಕ್ತ ಅಧ್ಯಕ್ಷ ಕೆ.ವಿ. ಶಂಕರಪ್ಪ ಮತ್ತು ಅವರ ಪಟಾಲಂಗಳಂತೆ ಬಕೆಟ್ ಹಿಡಿದು ಒಕ್ಕಲಿಗ ಸಮುದಾಯಕ್ಕೆ ನಿರಂತರವಾಗಿ ಮೋಸ ಮಾಡುತ್ತಿರುವ ಇದೇ ಸಂಘದ ಉಳಿದ 22 ಜನ ನಿರ್ದೇಶಕರು ಇದಕ್ಕೆ ನೇರ ಹೊಣೆ.

ಇಷ್ಟು ಜನರಲ್ಲಿ ಒಬ್ಬರಿಗಾದರೂ ಇಡೀ ಸಮುದಾಯಕ್ಕೆ ಎಸಗುತ್ತಿರುವ ದ್ರೋಹವನ್ನು ಪ್ರಶ್ನಿಸುವ ನೈತಿಕತೆ ಇಲ್ಲ. ಇಂತಹ ಸೋಗಲಾಡಿ, ರಣಹೇಡಿ 'ಉತ್ತರಕುಮಾರ'ರನ್ನು ನಮ್ಮ ಹೆಮ್ಮೆಯ ನಾಡಪ್ರಭು ಕೆಂಪೇಗೌಡರ ಜಯಂತಿಯ ವೇದಿಕೆಗಳಲ್ಲಿ ಅವಕಾಶ ಕಲ್ಪಿಸಿ ಗೌರವಿಸುತ್ತಿರುವುದು ಜನಾಂಗದ ದುರಂತ. ಇಂತಹ ಸತ್ಯಗಳು ಕಣ್ಣ ಮುಂದಿದ್ದರೂ, ರಾಜಧಾನಿ ಜಿಲ್ಲೆಯಲ್ಲೇ ಇಂತಹ ಅಯೋಗ್ಯರನ್ನು ಕುಲಬಾಂಧವರು ಪ್ರಶ್ನಿಸದೆ ಬಿಟ್ಟಿರುವುದು ಬೇರೆಡೆಗೆ ಎಂತಹ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಪ್ರತಿಯೊಬ್ಬರೂ ಯೋಚಿಸಬೇಕು.

ಪೂಜ್ಯ ಶ್ರೀಗಳ ಗಮನಕ್ಕೆ ಹಾಗೂ ಸಮುದಾಯದ ಐಕ್ಯತೆಗೆ ಒಂದು ಕರೆ

ಈ ನೈತಿಕ ಅಧಃಪತನದ ಹೊಣೆಗಾರಿಕೆ ಕೇವಲ ಜನಸಾಮಾನ್ಯರದ್ದಲ್ಲ. ಸಮುದಾಯದ ಕುಲ ಮಟ್ಟದ ಜವಾಬ್ದಾರಿ ವಹಿಸಿರುವ, ಭೈರವೈಕ್ಯ ಜಗದ್ಗುರು ಬಾಲಗಂಗಾಧರನಾಥ ಸ್ವಾಮೀಜಿಯವರ ಆಶಯಗಳನ್ನು ಮುನ್ನಡೆಸುತ್ತಿರುವ ಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಗೂ ಈ ವಾಸ್ತವ ಮತ್ತು ಅವಶ್ಯಕತೆ ಮನದಟ್ಟಾಗಬೇಕಿದೆ.

ನಾವು ಇಲ್ಲಿ ಮಾತನಾಡುತ್ತಿರುವುದು ನಮ್ಮ ಮೂಲ ಒಕ್ಕಲಿಗರ ಅಸ್ಮಿತೆಗಳ ಬಗ್ಗೆ. ನಮ್ಮ ಮುಂದಿನ ಪೀಳಿಗೆಗೆ ಅನೇಕ ಮಹೋನ್ನತ ತ್ಯಾಗಿಗಳು ಮತ್ತು ಸಾಧಕರ ಶ್ರಮದ ಫಲವನ್ನು ಯೋಗ್ಯ ರೀತಿಯಲ್ಲಿ ತಲುಪಿಸುವುದು ಪ್ರತಿಯೊಬ್ಬರ ಮೊದಲ ಕರ್ತವ್ಯ.

ಒಕ್ಕಲಿಗ ಕುಲಬಾಂಧವರು ಇಂದು ರಾಜಕೀಯ ಷಡ್ಯಂತ್ರಗಳಿಂದ ವಿಭಜಿತರಾಗಿರುವುದು ವಿಪರ್ಯಾಸ. ಆದರೆ ನೆನಪಿರಲಿ, ಇಂತಹ ಸವಾಲಿನ ಸ್ಥಿತಿಗಳಲ್ಲಿ ನಾವೆಲ್ಲರೂ ಒಮ್ಮೆ ಐಕ್ಯತೆ ಸಾಧಿಸಿದರೆ, ಈ ವ್ಯವಸ್ಥೆಯಲ್ಲಿ ಯಾರೂ ನಮಗಿಂತ ದೊಡ್ಡವರಲ್ಲ ಎಂಬುದು ಸಾಬೀತಾಗುವ ಸಮಯ ಬಹಳ ಸನಿಹದಲ್ಲಿದೆ. ಅದಕ್ಕೂ ಮುಂಚೆ ಸಮುದಾಯದ ಪ್ರತಿಯೊಬ್ಬ ಮುಖಂಡರು, 'ದೊಡ್ಡವರು' ತಮ್ಮ ಜವಾಬ್ದಾರಿಯನ್ನು ಅರಿತು, ಸಾಂಪ್ರದಾಯಿಕ ಗೌರವವನ್ನು ಮರು ಪ್ರಶ್ನಿಸದೆ ಒಗ್ಗೂಡಿದರೆ ಮಾತ್ರ ಈ ಸಮುದಾಯಕ್ಕೆ ಉಳಿಗಾಲ.

ಜೈ ಶ್ರೀ ಕೆಂಪೇಗೌಡ!

ಇಂತಿ ನಿಮ್ಮ,

ರೋಹನ್ ಗೌಡ

Connect

Join the conversation with Rohan Gowda

Contact

Follow

hello@rohangowda.com

+91 9513 369 356

© 2026. All rights reserved.