ಎಚ್ಚೆತ್ತುಕೊಳ್ಳಿ ಒಕ್ಕಲಿಗರೇ: ರಾಜಕೀಯ ಚದುರಂಗದಾಟಕ್ಕೆ ನಮ್ಮ ಭವಿಷ್ಯ ಮತ್ತು ಆಸ್ತಿ ಬಲಿಯಾಗದಿರಲಿ!
"ಒಕ್ಕಲಿಗ ಸಮುದಾಯದ ಭವಿಷ್ಯ, ಅಸ್ಮಿತೆ ಮತ್ತು ಆಸ್ತಿ ರಕ್ಷಣೆಯ ಕುರಿತಾದ ಕಣ್ಣು ತೆರೆಸುವ ವಿಶೇಷ ಸಂಪಾದಕೀಯ. ರಾಜಕೀಯ ನಾಯಕರ ಸ್ವಾರ್ಥದ. ಚದುರಂಗದಾಟಕ್ಕೆ ನಮ್ಮ ಒಕ್ಕಲುತನದ ಸಂಪ್ರದಾಯ ಬಲಿಯಾಗದಿರಲಿ! ಸಜ್ಜೆಪಾಳ್ಯದಂತಹ ಸಮುದಾಯದ ಆಸ್ತಿಯನ್ನು ಉಳಿಸಿಕೊಳ್ಳಲು ಹಾಗೂ ಭವಿಷ್ಯದ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಪ್ರತಿಯೊಬ್ಬ ಒಕ್ಕಲಿಗನೂ ಓದಲೇಬೇಕಾದ ಮಹತ್ವದ ಲೇಖನ."
Rohan Gowda
6/30/20261 min read


📰 ವಿಶೇಷ ಸಂಪಾದಕೀಯ:
ಎಚ್ಚೆತ್ತುಕೊಳ್ಳಿ ಒಕ್ಕಲಿಗರೇ: ರಾಜಕೀಯ ಚದುರಂಗದಾಟಕ್ಕೆ ನಮ್ಮ ಭವಿಷ್ಯ ಮತ್ತು ಆಸ್ತಿ ಬಲಿಯಾಗದಿರಲಿ!
ಇಂದು ಒಕ್ಕಲಿಗ ಸಮುದಾಯ ಬಹಳ ಸೂಕ್ಷ್ಮವಾಗಿ ಗಮನಿಸಬೇಕಾದ ಕಾಲಘಟ್ಟವಿದು. ಏಕೆಂದರೆ, ಪ್ರಸ್ತುತ ನಡೆಯುತ್ತಿರುವ ವಿಷಯಗಳು ನಿಜವಾಗಿಯೂ ನಮ್ಮ ಹೃದಯದ ಕಣ್ಣನ್ನು ತೆರೆಸುವಂತಿವೆ. ಇದನ್ನು ಮೀರಿ, ಒಂದು ವೇಳೆ ಬೇಜವಾಬ್ದಾರಿತನದಿಂದ ನಮ್ಮ ಜವಾಬ್ದಾರಿಗಳನ್ನು ನಾವು ಅರಿಯದಿದ್ದರೆ, ನಮ್ಮ ಭವಿಷ್ಯವನ್ನು ನಾವೇ ಹಾಳು ಮಾಡಿದಂತೆ ಎಂಬ ಎಚ್ಚರಿಕೆ ಈಗ ಅತ್ಯಗತ್ಯ!
ಮರೆಯಾಗುತ್ತಿರುವ ನಾಯಕತ್ವದ ಮೌಲ್ಯಗಳು
ಇಂದು ಸಮಾಜದಲ್ಲಿ ನಾವು ಬಹಳ ಹಿಂದಿನಿಂದಲೂ ಗಮನಿಸುತ್ತಿರುವಂತೆ, ನಮ್ಮ ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ಹಾಗೂ ನಮ್ಮ ಸಮುದಾಯವು ಒಂದಿಷ್ಟು ನ್ಯಾಯ, ಸಮಾಜವನ್ನು ಬಲಿಷ್ಠವಾಗಿ ಸಮತೋಲನದಲ್ಲಿ ತೆಗೆದುಕೊಳ್ಳಲಿ ಎಂದು ನಾವು ಆಶಿಸಿದ್ದೆವು. ಜೊತೆಗೆ, ನಮ್ಮ ನಾಡಪ್ರಭು ಕೆಂಪೇಗೌಡರ ಅಸ್ಮಿತೆಗಳನ್ನು ಇವರೆಲ್ಲ ಗೌರವಿಸುತ್ತಾರೆ ಎಂದು ನಂಬಿ, ಅನೇಕ ಪಕ್ಷಗಳನ್ನು ಕಟ್ಟಿ ಬೆಳೆಸಲು ನಮ್ಮ ಸಮುದಾಯದಿಂದ ಮಕ್ಕಳನ್ನು ಕೊಟ್ಟಿದ್ದೇವೆ. ಹೀಗೆ ಬೆಳೆದವರಲ್ಲಿ ಅನೇಕರಿದ್ದಾರೆ; ಮಾಜಿ ಪ್ರಧಾನಿಗಳು, ಮುಖ್ಯಮಂತ್ರಿಗಳು, ಮಂತ್ರಿಗಳು, ಕ್ಷೇತ್ರದ ಸಾಧಕರು ಮತ್ತು ದಾನಿಗಳು.
ಹೀಗಿರುವಾಗ ಪ್ರಸ್ತುತ ನಡೆಯುತ್ತಿರುವ ವಿಷಯಗಳನ್ನು ಗಮನಿಸಿದರೆ ಬೇಸರವಾಗುತ್ತದೆ. ಹಿಂದೆ 'ಒಕ್ಕಲಿಗರು' ಎಂಬ ಮಾತು ಬಹಳ ಗೌರವದಿಂದ, ಭಾವನಾತ್ಮಕವಾಗಿ, ಸಮಾಜದ ಸಾಮರಸ್ಯದಿಂದ ಭಾವಿಸಲಾಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ನಮ್ಮ ನಾಯಕರು ಇಂದು ನಮ್ಮನ್ನು ಮತ್ತು ನಮ್ಮ ಸಂಪ್ರದಾಯವನ್ನು ಮರೆತಿದ್ದಾರೆ. ಉದಾಹರಣೆಗೆ, ಕೆಂಪೇಗೌಡರ ಅಸ್ಮಿತೆಗಳನ್ನು ಉಳಿಸುವ ಹಾಗೂ ಸಾಂಘಿಕವಾಗಿ ಯೋಚಿಸುವ ಯೋಜನೆ ಕೆ.ಎಚ್. ರಾಮಯ್ಯನವರ ನಿಸ್ವಾರ್ಥ ಸೇವೆಯನ್ನು ಅಳವಡಿಸಿಕೊಳ್ಳುವುದಕ್ಕೆ ಬದಲಾಗಿ, ಇಂದು ಕೇವಲ ವ್ಯಕ್ತಿನಿಷ್ಠ ಮತ್ತು ರಾಜಕೀಯ ಪಕ್ಷಗಳ ನಿಷ್ಠೆಗೆ ಸಮಾಜ ಹೋಗುತ್ತಿರುವುದು ಅತ್ಯಂತ ಬೇಸರದ ಸಂಗತಿ.
ನಾಯಕರ ನಡೆ ಮತ್ತು ಸಮುದಾಯದ ಸ್ಪಂದನೆ
ಒಮ್ಮೆ ಪ್ರಸಕ್ತ ಸಮುದಾಯದ ವಾಸ್ತವದ ನಾಯಕರಾಗಿ, ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಿ.ಕೆ. ಶಿವಕುಮಾರ್ ರವರು ಸಮುದಾಯಕ್ಕೆ ತಂದುಕೊಟ್ಟಿರುವ ಒಂದು ವಿಷಯವನ್ನು ಹಿಂದಕ್ಕೆ ಮೆಲುಕು ಹಾಕಿದಾಗ, ಇವರ ಮೇಲೆ ಒಮ್ಮೆ ಐಟಿ ದಾಳಿಯಾಗುತ್ತದೆ; ಆಗ ಇಡೀ ಸಮುದಾಯ ಮತ್ತು ಸಮುದಾಯದ ಮಠಗಳು, ಮಠಾಧೀಶರು ಸಾರ್ವಜನಿಕವಾಗಿ ಪ್ರತಿಭಟಿಸುತ್ತಾರೆ. ತದನಂತರ ಪ್ರಸಕ್ತ ಮುಖ್ಯಮಂತ್ರಿಗಳು ಈ ಹಿಂದೆ ರಾಜ್ಯ ಒಕ್ಕಲಿಗರ ಸಂಘಕ್ಕೆ ಒಂದಿಷ್ಟು ಕೋಟಿ ಹಣವನ್ನು ಉಳಿತಾಯ ಮಾಡಿಕೊಟ್ಟಿರುತ್ತಾರೆ. ಹಾಗೂ ಕೃಷ್ಣ ಬೈರೇಗೌಡರು ತಮ್ಮ ತಂದೆಯವರ ವರ್ಚಸ್ಸಿಗೆ ತೂಗುವಂತೆ ಸಜ್ಜೆ ಪಾಳ್ಯದ ಭೂಮಿಯ ವಿಷಯದಲ್ಲಿ ಬಹಳ ನ್ಯಾಯಯುತವಾಗಿ ನ್ಯಾಯ ಕೊಡಿಸುವಲ್ಲಿ ಭ್ರಷ್ಟಾಚಾರದಿಂದ ದೂರ ನಿಂತು ಸದೃಢವಾಗಿ ನಿಲ್ಲುತ್ತಾರೆ.
ಇನ್ನು ಅದೇ ರೀತಿ ಮತ್ತೊಂದು ತಕ್ಕಡಿಯಲ್ಲಿ ತೂಗುವಾಗ, ಎಚ್.ಡಿ. ದೇವೇಗೌಡರು ನಮ್ಮ ಸಮುದಾಯದ ಒಕ್ಕಲಿಗ ಶಕ್ತಿಯಿಂದ ಪ್ರಧಾನಮಂತ್ರಿಯವರೆಗೂ ಬೆಳೆಯುತ್ತಾರೆ. ಸಮುದಾಯಕ್ಕೆ ಒಂದು ಒಳ್ಳೆಯ ಗೌರವದ ಕಿರೀಟವಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಾರೆ. ಆದರೆ, ತದನಂತರದ ದುರಂತವೆಂದರೆ, ಅವರ ಮಕ್ಕಳಲ್ಲಿ ಯಾರಲ್ಲಿಯೂ ಸಮುದಾಯದ ಭಾವನೆ ಇಲ್ಲ!
"ಕುಮಾರಣ್ಣ" ಎಂದು ಪ್ರೀತಿಯಿಂದ ಮನೆಮಗ, ಅಣ್ಣ ಎಂದೆಲ್ಲಾ ಕರೆದು ಪ್ರೀತಿಸುವ ಒಕ್ಕಲಿಗರು? ಎಲ್ಲಿಯೂ ಇಲ್ಲಿಯವರೆಗೆ "ನಾನು ನಿಮ್ಮ ಮನೆಯ ಮಗ, ಒಬ್ಬ ಹೆಮ್ಮೆಯ ಒಕ್ಕಲಿಗ, ನಿಮ್ಮೊಂದಿಗೆ ನಾನು ಇದ್ದೇನೆ ಹಾಗೂ ಒಕ್ಕಲಿಗರು ಜಾತಿವಾದಿಗಳಲ್ಲ, ಸಮಾಜವನ್ನು ಕಟ್ಟುವ ಸಾಮರಸ್ಯವಾದಿಗಳು" ಎಂಬ ಮಾತುಗಳನ್ನು ಆಡಿರುವ ಇತಿಹಾಸವೇ ಇಲ್ಲ!
ಅಷ್ಟೇ ಏಕೆ, ಹಿಂದೊಮ್ಮೆ ಪ್ರಸಕ್ತ ನಮ್ಮ ಒಕ್ಕಲಿಗ ಪೀಠಾಧ್ಯಕ್ಷರಾಗಿ ಧರ್ಮಕರ್ಮಗಳಲ್ಲಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಒಂದು ವಿಚಾರವನ್ನು ಮಾತನಾಡಲು ಹೋದಾಗ, ಅದೇ ಸಂದರ್ಭದಲ್ಲಿ "ಸ್ವಾಮೀಜಿರವರು ನನ್ನ ಬಳಿ ಬರಲಿಲ್ಲ" ಎಂಬ ಅಹಂಕಾರದ ಮಾತುಗಳನ್ನು ಆಡಿದ್ದು ಇತಿಹಾಸವು ಹೇಳುತ್ತದೆ. ಅಲ್ಲಿಯೂ ಸಹ ಅವರ ಭಾವನೆ ಸೊನ್ನೆ.
ಆಘಾತಕಾರಿ ಹೇಳಿಕೆಗಳು ಹಾಗೂ ಸಜ್ಜೆ ಪಾಳ್ಯದ ವಿವಾದ
ಇನ್ನು ಉಳಿದಂತೆ, ವಯಸ್ಸಿನ ಕಾರಣ ಅಥವಾ ಮಾನಸಿಕ ಆಂದೋಲನದಿಂದ ವಿಚಲಿತರಾಗಿರಬಹುದು, ಸನ್ಮಾನ್ಯ ದೇವೇಗೌಡರು ತಮ್ಮ ಪಕ್ಷದ ಕೋಲಾರ ಜಿಲ್ಲೆಯ ಕಾರ್ಯಕ್ರಮವೊಂದರಲ್ಲಿ "ಮುಂದಿನ ಜನ್ಮದಲ್ಲಿ ತಾವು ಮುಸಲ್ಮಾನರಾಗಿ ಹುಟ್ಟುತ್ತೇವೆ" ಎಂದು ಹೇಳಿ ಮತಕ್ಕಾಗಿ ಅಥವಾ ರಾಜಕೀಯಕ್ಕಾಗಿ ಆಡಿದ ಮಾತು, ಅಲ್ಲಿ ನೆರೆದಿದ್ದ ಅನೇಕ ಒಕ್ಕಲಿಗರ ಮನದಾಳದಲ್ಲಿ ಚಾಟಿಯನ್ನು ಬೀಸಿದಂತೆ ಆಘಾತವನ್ನು ತಂದಿದ್ದು ಎಂದಿಗೂ ಮರೆಯುವಂತಹ ವಿಚಾರವಲ್ಲ.
ಇವೆಲ್ಲವನ್ನು ಒಂದು ಬದಿಗೆ ಇಟ್ಟು, ಸದ್ಯ ನಾವು ಏನು ಮಾಡಬೇಕು ಎಂದು ಯೋಚಿಸುವ ಸಮಯದಲ್ಲಿ, ಸಜ್ಜೆ ಪಾಳ್ಯದ ಸಾತ್ವಿ ರಂಗಮ್ಮನವರು ನೀಡಿದ 15,000 ಕ್ಕೂ ಹೆಚ್ಚು ಮೌಲ್ಯದ ಒಕ್ಕಲಿಗ ಸಮುದಾಯದ ಆಸ್ತಿಯನ್ನು ಮತ್ತು ಅದರ ವಿಚಾರಕ್ಕೆ "ತಲೆ ಹಾಕಬೇಡಿ" ಎಂದು ಅಂದಿನ ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷರಾಗಿದ್ದ ಅಪ್ಪಾಜಿಗೌಡ ರವರನ್ನು ಕರೆಸಿ, ಕುಮಾರಣ್ಣನವರು "ಈ ವಿಚಾರಕ್ಕೆ ನೀವು ಬರಬಾರದು" ಎಂದು ಒಬ್ಬ ನ್ಯಾಯಾಧೀಶರ ಮನೆಯಲ್ಲಿ ವ್ಯವಹರಿಸುತ್ತಾರೆ ಎಂದು ಅಂದಿನ ಅಧ್ಯಕ್ಷರಾಗಿದ್ದ ಅಪ್ಪಾಜಿ ಗೌಡರೇ ಹೇಳಿರುವ ಹೇಳಿಕೆಯನ್ನು ಮಾಧ್ಯಮದಲ್ಲಿ ಯಾರು ಬೇಕಾದರೂ ನೋಡಬಹುದು.
ಅದು ಸತ್ಯಕ್ಕೆ ದೂರವಾದ ವಿಚಾರವೇ ಇರಲಿ ಅಥವಾ ಹತ್ತಿರದ ವಿಚಾರವೇ ಇರಲಿ ಬಿಡಲಿ, ಅಲ್ಲಿಂದ ಇಲ್ಲಿಯವರೆಗೆ ಎಲ್ಲಿಯೂ ಕುಮಾರಣ್ಣನವರು ಸಜ್ಜೆ ಪಾಳ್ಯದ ವಿಚಾರಕ್ಕಾಗಿ, ನ್ಯಾಯದ ವಿಚಾರವಾಗಿ ಧ್ವನಿ ಗುಡಿಸಲೇ ಇಲ್ಲ. ಅದಕ್ಕಿಂತಲೂ ಆಘಾತದ ವಿಷಯವೆಂದರೆ, ಪ್ರಸಕ್ತ ಎಂಎಲ್ಸಿ ಆಗಿರುವ ಜವರಾಯಿಗೌಡ, ಜೆಡಿಎಸ್ ಪಕ್ಷದ ಸಂಬಂಧ ಮತ್ತು ಅವರ ಹಾಗೂ ಕುಮಾರಣ್ಣನವರ ಸಂಬಂಧ ಏನು ಎಂಬುದು ಇಡೀ ವಿಶ್ವಕ್ಕೆ ಗೊತ್ತು.
ಈಗ ಇಲ್ಲಿ ಕಾಗದದ ಮತ್ತು ಪತ್ರದ ವ್ಯವಹಾರದಲ್ಲಿ ಕಾನೂನಿನ ಅಡಿಯಲ್ಲಿ ಕಣ್ಣಿಗೆ ಕಾಣುವಂತಹ ವಿಚಾರವೆಂದರೆ, ಜವರಾಯಿ ಗೌಡ ಅವರು ಸಜ್ಜೆ ಪಾಳ್ಯದ ಜಮೀನನ್ನು ಕರಾರುವಕ್ಕಾಗಿ ಕಬ್ಜಾ ಮಾಡಿದ್ದಾರೆ. ಹಾಗೂ ಇದೇ ವಿಚಾರದ ನ್ಯಾಯಾಲಯದ ಅಂಗಳದಲ್ಲಿ ಇವರು ಮುಖಕ್ಕೆ ಮಂಗಳಾರತಿ ಹಾಕಿಸಿಕೊಂಡು ಸೋತಿರುತ್ತಾರೆ. ಈಗಲೂ ಸಹ ಎಲ್ಲಿಯೂ ಕುಮಾರಣ್ಣನವರು ಅವರನ್ನು ಪಕ್ಷದಿಂದ ಉಚ್ಚಾಟಿಸುವ ವಿಚಾರವಾಗಲಿ ಅಥವಾ ಸಜ್ಜೆ ಪಾಳ್ಯದ ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಧ್ವನಿಯಾಗಲಿ ಎಲ್ಲಿಯೂ ಹೊರ ಬಿಟ್ಟಿಲ್ಲ.
ಸಮುದಾಯದ ಹಾದಿ ತಪ್ಪಿಸುವ ಯತ್ನ ಬೇಡ
ಆದರೆ ವಿಪರ್ಯಾಸ ಎಂದರೆ, ಇಂದು ಚಿಕ್ಕಬಳ್ಳಾಪುರದಲ್ಲಿ ರಾಜಕೀಯದ ಮಾತುಕತೆಗಳಿಗೆ ಜೋತು ಬಿದ್ದು, ಅಮಾಯಕ ಚಿಕ್ಕಬಳ್ಳಾಪುರ ಜಿಲ್ಲೆಯ ಒಕ್ಕಲಿಗ ಕುಲಬಾಂಧವರು ರಾಜಕೀಯವನ್ನು ಸಮುದಾಯದ ವಿಷಯವನ್ನಾಗಿ ಮನಸ್ಸಿಗೆ ಹಾಕಿಕೊಂಡು, ಒಕ್ಕಲಿಗ ಸಮುದಾಯವನ್ನು ಇಂತಹ ಪರಿಸ್ಥಿತಿಯಲ್ಲಿ ಬಳಸಿಕೊಳ್ಳುವುದು ಎಷ್ಟು ಸರಿ? ಇದು ನಿಜಕ್ಕೂ ಅಕ್ಷಮ್ಯ ಅಪರಾಧ ಹಾಗೂ ಕೆಂಪೇಗೌಡರ ಅಸ್ಮಿತೆಗೆ ಕಳಂಕಿತರು ಮಾತ್ರ ಈ ರೀತಿಯ ವರ್ತನೆಯನ್ನು ಮಾಡಬಹುದು.
ಏಕೆ ಈ ವಿಚಾರವನ್ನು ಹೇಳುತ್ತಿದ್ದೇನೆ ಎಂದರೆ, ಸಮುದಾಯದಿಂದ ನಾವುಗಳು ನಾಯಕರುಗಳನ್ನು ಮುಂದಕ್ಕೆ ಬಿಟ್ಟ ನಂತರ, ಅಲ್ಲಿನ ಸಮಸ್ಯೆಗಳನ್ನು ಅವರು ಮುಂದಾಳತ್ವ ವಹಿಸಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು, ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಅಮಾಯಕ ಕಾರ್ಯಕರ್ತರನ್ನು, ಒಕ್ಕಲಿಗ ಸಂಪ್ರದಾಯದ ನಿಜವಾದ ಕಟ್ಟಾಳುಗಳನ್ನು ದಿಕ್ಕು ತಪ್ಪಿಸಬಾರದು.
ಮುಂದಿನ ದಾರಿ: ಸಂಕಲ್ಪ ಮತ್ತು ಜಾಗೃತಿ
ಈ ವಿಚಾರ ನಿಜಕ್ಕೂ ಆಘಾತಕಾರಿ! ಒಕ್ಕಲಿಗರು ಇದನ್ನು ಅರಿಯಬೇಕು. ಅದು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ಕೊನೆಯ ಪಕ್ಷ ಜನತಾದಳವು ಇರಲಿ, ರಾಜಕೀಯ ಎಂದಿಗೂ ಕೇವಲ ರಾಜಕೀಯವೇ ಹೊರತು ನಮ್ಮ ಸಂಪ್ರದಾಯವಲ್ಲ. ದಿನಕ್ಕೊಂದು ಮಾತು ಆಡುತ್ತಾ ಬಣ್ಣ ಬದಲಿಸುವ ಜಾಯಮಾನದ ರಾಜಕೀಯ ಕ್ಷೇತ್ರದಲ್ಲಿ ಇಂದು ಸಿದ್ಧಾಂತಗಳು ಸತ್ತಿವೆ.
ಇದನ್ನು ಅರಿತು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಆದರೂ, ಇನ್ನು ಮುಂದೆ ನಾವು "ಒಕ್ಕಲಿಗರು" ಎಂದು ಒಕ್ಕಲುತನದ ಪರವಾಗಿ ದೃಢವಾಗಿ ನಿಲ್ಲಬೇಕು.
ಒಕ್ಕಲಿಗರ ಸಂಘವನ್ನು ಸರಿ ಮಾಡುವ ನಿಟ್ಟಿನಲ್ಲಿ ನಾವು ಸಂಕಲ್ಪ ಮಾಡಬೇಕು.
ಜೊತೆಗೆ ಸಜ್ಜೆ ಪಾಳ್ಯದಂತಹ ಆಸ್ತಿಯನ್ನು, ನಮ್ಮ ಸಮುದಾಯದ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಚಟುವಟಿಕೆಗಳನ್ನು ಮಾಡಲು ಇರುವ ಸ್ಥಳವನ್ನು ಕಾಪಾಡಿಕೊಳ್ಳಲು ಪಣತೊಡಬೇಕು.
ಅದನ್ನು ಬಿಟ್ಟು, ಸಮುದಾಯವನ್ನು ಸದಾಕಾಲ ಬಳಸುತ್ತಿರುವ, ಕೇವಲ ರಾಜಕೀಯಕ್ಕಾಗಿ 'ಸಮಾಜಸೇವೆ' ಎಂಬೆಲ್ಲ ಬಣ್ಣದ ಮಾತುಗಳನ್ನು ಆಡುವ ಇಂದಿನ ರಾಜಕೀಯ ಚದುರಂಗದಾಟಕ್ಕೆ ನಮ್ಮ ಒಕ್ಕಲಿಗ ಸಮುದಾಯ ಖಂಡಿತಾ ಬಲಿಯಾಗಬಾರದು.
ಒಂದು ಕಳಕಳಿಯ ಮನವಿ: ದಯಮಾಡಿ ಈ ವಿಷಯವಾಗಿ, ಅನೇಕರು ತಮ್ಮ ಸುತ್ತಮುತ್ತ ಇರುವ ಬುದ್ಧಿವಂತರು ಮತ್ತು ಜವಾಬ್ದಾರಿಯುತ ಒಕ್ಕಲಿಗರು, ಈ ವಿಚಾರವನ್ನು ನಮ್ಮ ಹಳ್ಳಿಗಾಡಿನ ನಿಜವಾದ ಒಕ್ಕಲುತನದ ಸಂಪ್ರದಾಯವನ್ನು ಕಾಪಾಡುತ್ತಿರುವ ಪ್ರತಿಯೊಬ್ಬ ಒಕ್ಕಲಿಗನಿಗೆ ಅರ್ಥ ಮಾಡಿಸಿ, ಅವನ ದಿಕ್ಕು ತಪ್ಪದಂತೆ ತಿಳಿಹೇಳಬೇಕು. ಅವರು ಚುನಾವಣಾ ಸಂದರ್ಭದಲ್ಲಿ ಯಾರಿಗಾದರೂ ಮತ ಹಾಕಲಿ, ಅವನು ಯಾವ ಜಾತಿಯವನೇ ಆಗಿರಲಿ ಅಥವಾ ಸ್ವಜಾತಿಯವನೇ ಆಗಿರಲಿ; ನಮ್ಮ ಒಕ್ಕಲಿಗರ ಒಕ್ಕಲುತನದ ವಿಷಯಗಳಿಗೆ, ನಮ್ಮ ಸಮುದಾಯದ ಯುವ ಪೀಳಿಗೆಯ ಭವಿಷ್ಯಕ್ಕೆ ಭರವಸೆ ಕೊಡುವಂತಹ ವ್ಯಕ್ತಿಗಳಿಗೆ ಮಾತ್ರ ಸಹಕರಿಸಬೇಕು. ಇಂದಿನ ಸಾಂಪ್ರದಾಯಿಕ ವ್ಯವಸ್ಥೆ ನಷ್ಟವಾಗಿ, ಈ ಕೆಟ್ಟ ವ್ಯವಸ್ಥೆಯು ನಮ್ಮ ಮುಂದಿನ ಭವಿಷ್ಯವನ್ನು ಸಂಪೂರ್ಣ ಹಾಳು ಮಾಡುತ್ತದೆ.
ಎಚ್ಚೆತ್ತುಕೊಳ್ಳಿ ಒಕ್ಕಲಿಗರೇ, ಎಚ್ಚೆತ್ತುಕೊಳ್ಳಿ! ಇನ್ನಾದರೂ ಜಾಗೃತರಾಗಿ . ನಮ್ಮ ಹಿರಿಯರು ನಮಗೆ ಕೊಟ್ಟ ಆಸ್ತಿ ನಮ್ಮ ಸಂಪ್ರದಾಯ ಎಂಬುದನ್ನು ಮರೆಯದಿರಿ...